ವರದಾಚಾರ್, ಟೈಗರ್
	1876-1950. ಕರ್ಣಾಟಕ ಸಂಗೀತ ಪ್ರಪಂಚದ ಹಿರಿಯ ಕಲಾವಿದರು, ವಾಗ್ಗೇಯಕಾರರು ಮತ್ತು ವಿದ್ವಾಂಸರು. ತಮಿಳುನಾಡಿನ ತಿರುವೋಟ್ರಿಯೂರ್ ಸಮೀಪದ ಕಳಾದಿಪೇಟೆ ಎಂಬಲ್ಲಿ 1876 ಆಗಸ್ಟ್ 1ರಂದು ಜನಿಸಿದರು. ಇವರ ಆರು ಸೋದರರ ಪೈಕಿ ಮೂವರು ಸಂಗೀತ ಕ್ಷೇತ್ರದಲ್ಲಿ ವಿಖ್ಯಾತರಾದರು. ಹಿರಿಯರಾದ ಶ್ರೀನಿವಾಸ ಅಯ್ಯಂಗಾರ್ಯರು ಉತ್ತಮ ಸಂಗೀತಶಾಸ್ತ್ರಜ್ಞರಾಗಿ, ಗಾನಭಾಸ್ಕರ, ತ್ಯಾಗರಾಜ ಹೃದಯಸಂಗೀತರಸಾರ್ಣವ ಮೊದಲಾದ ಸಂಗೀತ ಗ್ರಂಥ ಗಳನ್ನು ರಚಿಸಿ ಸಂಗೀತಕ್ಕೆ ಮಹೋಪಕಾರ ಮಾಡಿದ್ದಾರೆ. ಇಷ್ಟೇ ಅಲ್ಲದೆ ನೃತ್ಯಕಲಾವಿದರಾಗಿ ಒಂದು ಸಂಗೀತಶಾಲೆಯನ್ನು ನಡೆಸುತ್ತಿ ದ್ದುದೂ ಉಂಟು. ಕಿರಿಯರಾದ ಕೃಷ್ಣಮಾಚಾರ್ಯರು ವೈಣಿಕರಾಗಿ ಅನೇಕ ರಚನೆಗಳನ್ನು ಮಾಡಿ ವಾಗ್ಗೇಯಕಾರರಾಗಿ ಪ್ರಸಿದ್ಧರಾದರು.

	ಮದರಾಸಿನ ಅಡ್ಯಾರಿನಲ್ಲಿರುವ ಕಲಾಕ್ಷೇತ್ರದ ಪ್ರೇರಕಶಕ್ತಿಯಾಗಿದ್ದ ರುಕ್ಮಿಣೀ ದೇವಿ ಅರುಂಡೇಲ್ ಅವರು ದೇಶದ ನಾನಾ ಕಡೆಗಳಿಂದ ನುರಿತ ಘನವಿದ್ವಾಂಸರನ್ನು ಅಲ್ಲಿಗೆ ಬರಮಾಡಿಕೊಂಡು ಅವರ ಅನುಭವಗಳನ್ನು ಕಲಾಸೇವೆಯಲ್ಲಿ ತೊಡಗಿಸುವಂಥ ಅವಕಾಶ ನೀಡುತ್ತಿದ್ದರು. ಹೀಗೆ ಅಲ್ಲಿಗೆ ಬಂದು ತೊಳಗಿ ಬೆಳಗಿದ ಎರಡು ಮಹಾಚೇತನಗಳೆಂದರೆ ಟೈಗರ್ ವರದಾಚಾರ್ ಹಾಗೂ ಮೈಸೂರು ವಾಸುದೇವಾಚಾರ್ಯರು.

	ಇವರ ಅನೇಕ ರಚನೆಗಳಿವೆ. ಕಲಾಕ್ಷೇತ್ರದಲ್ಲಿದ್ದಾಗ ಇವರು ಕಾಳಿದಾಸನ ಕುಮಾರಸಂಭವ ಕಾವ್ಯವನ್ನು ನೃತ್ಯರೂಪಕ್ಕೆ ಅಳವಡಿಸಿದರು. ಇದು ಇವರ ಕಲ್ಪನೆ ಮತ್ತು ರಚನಾ ಸಾಮಥ್ರ್ಯಕ್ಕೆ ಹಿಡಿದ ಕನ್ನಡಿ. ಒಟ್ಟು ಐವತ್ತು ವರ್ಣಮಟ್ಟುಗಳಲ್ಲಿ ಅಡಕವಾಗಿರುವ ಈ ನೃತ್ಯರೂಪಕದಲ್ಲಿ ಉಪಯೋಗಿಸಿರುವ ಬೇಗಡೆ, ಹಿಂದೋಳ, ತೋಡಿ, ಬಿಲಹರಿರಾಗಗಳು ಪ್ರಭಾವಯುತವಾಗಿವೆ. ಇವುಗಳಲ್ಲಿ ಪ್ರಕಟವಾ ಗಿರುವ ಲಯವಿನ್ಯಾಸ ಹಾಗೂ ತೀಮಾರ್ನಗಳು ಚಮತ್ಕಾರಯುತವಾಗಿವೆ. ಆರಭಿ ಹಾಗೂ ಕಲ್ಯಾಣಿರಾಗಗಳ ಆದಿತಾಳ ವರ್ಣಗಳು ಮುಖ್ಯವಾದವು. ಜೊತೆಗೆ ಮಣಿರಂಗು, ಜನರಂಜನಿ ರಾಗಗಳಲ್ಲಿ ಎರಡು ಝಂಪೆ ತಾಳವರ್ಣಗಳನ್ನೂ ಅಭೋಗಿ, ವಾಚಸ್ಪತಿ, ಕೇದಾರರಾಗಗಳಲ್ಲಿ ಅಟ್ಟತಾಳ ವರ್ಣಗಳನ್ನು ಶ್ರೀರಂಜನಿ ಮತ್ತು ಸಾವೇರಿ ರಾಗಗಳಲ್ಲಿ ಪದತಾನ ವರ್ಣಗಳನ್ನು ರಚಿಸಿದ್ದಾರೆ. ಇವಲ್ಲದೆ ಬಹುದಾರಿ, ಯದುಕುಲ ಕಾಂಬೋಧಿ ರಾಗಗಳಲ್ಲಿ ಎರಡು ವರ್ಣಗಳಿವೆ.

	ರಾಜಾಜಿಯವರು ಭಾರತದ ಗವರ್ನರ್ ಜನರಲ್ ಆಗಿದ್ದಾಗ 1948ರಲ್ಲಿ ಕಲಾಕ್ಷೇತ್ರಕ್ಕೆ ಭೇಟಿಯಿತ್ತಾಗ, ದರ್ಬಾರ್ ರಾಗದಲ್ಲಿ ಇವರು ರಚಿಸಿದ ನೀದೆ ಸುದಿನಮು ಎಂಬ ಕೀರ್ತನೆ ಅತ್ಯುತ್ತಮ ಕೀರ್ತನೆಯೆಂದು ಪ್ರಶಂಸೆ ಗಳಿಸಿತು.

	ಇವರಿಗೆ ಸಂಗೀತ ತ್ರಿಮೂರ್ತಿಗಳ ಕೃತಿಗಳಲ್ಲಿ ಬಹಳ ಆಸಕ್ತಿ. ತ್ಯಾಗರಾಜರ ಕೀರ್ತನೆಗಳನ್ನು ಅರ್ಥಗರ್ಭಿತ ವಾಗಿ ಹಾಡುತ್ತಿದ್ದ ಇವರು ತಾವು ರಚಿಸಿದ ಕೇದಾರರಾಗದ ಅಟ್ಟತಾಳ ವರ್ಣ ಸಾಹಿತ್ಯವನ್ನು ಆ ಸದ್ಗುರುವಿನ ಅಡಿದಾವರೆಗಳಲ್ಲಿ ಸಮರ್ಪಿಸಿದ್ದಾರೆ. ಅಭಿನಯಶಾಸ್ತ್ರದಲ್ಲಿ ಆಳವಾದ ಪಾಂಡಿತ್ಯವಿದ್ದುದರಿಂದ ಕ್ಷೇತ್ರಜ್ಞನ ಪದಗಳನ್ನು ವಿಶೇಷ ಅರ್ಥ ಮತ್ತು ಭಾವಪೂರ್ಣ ಶೈಲಿಯೊಂದಿಗೆ ಹಾಡುವ ಸಾಮಥ್ರ್ಯ ಪಡೆದುಕೊಂಡಿದ್ದರು. ಕರ್ನಾಟಕದಲ್ಲಿ ಬಹಳ ಕಾಲವಿದ್ದುದರಿಂದ ಕನ್ನಡ ಕೀರ್ತನೆಗಳನ್ನು ಅಚ್ಚುಕಟ್ಟಾಗಿ ಹಾಡುತ್ತಿದ್ದರು. ಕನಕದಾಸರ  ಭಜಿಸಿ ಬದುಕೆಲೊ ಮಾನವ ಕೀರ್ತನೆ ಇವರಿಗೆ ಪ್ರಿಯವಾಗಿತ್ತು. 

	ಆಗಾಗ ರಾಗಲಕ್ಷಣಗಳನ್ನು ಸೋದಾಹರಣ ವಿವರಿಸುತ್ತಿದ್ದರು. ಇವರು ಸಾಮಾನ್ಯ ರಾಗಗಳಾದ ತೋಡಿ, ಖರಹರಪ್ರಿಯ, ಕಲ್ಯಾಣಿ ರಾಗಗಳನ್ನು ಎಷ್ಟು ನಿರಾಯಾಸವಾಗಿ ಹಾಡುತ್ತಿದ್ದರೋ ಅಷ್ಟೇ ನಿರಾಯಾಸವಾಗಿ ಅಪೂರ್ವ ರಾಗಗಳಾದ ಕೋಕಿಲಪ್ರಿಯ, ಕಾನಡ, ಯದುಕುಲ ಕಾಂಬೋಧಿ, ಪೂರ್ಣಚಂದ್ರಿಕ ಮೊದಲಾದವನ್ನೂ ಹಾಡಬಲ್ಲ ವರಾಗಿದ್ದರು.

	ಕಚೇರಿಗಳಲ್ಲಿ ದರ್ಬಾರ್ ಅಥವಾ ಕಲ್ಯಾಣಿ ರಾಗದ ವರ್ಣವನ್ನು ತ್ರಿಕಾಲದಲ್ಲಿ ಹಾಡುತ್ತಿದ್ದುದು ಇವರ ಮತ್ತೊಂದು ವೈಶಿಷ್ಟ್ಯ. ಇದರೊಡನೆ ಇವರ ಅಚ್ಚುಮೆಚ್ಚಿನ ಏತಾವುನರಾ ಎಂಬ ಯದುಕುಲ ಕಾಂಬೋಧಿ ರಾಗದ ಕೀರ್ತನೆ ವೈಶಿಷ್ಟ್ಯಪೂರ್ಣವಾಗಿತ್ತು. ಸಂಗೀತಶಾಸ್ತ್ರಕ್ಕೆ ಸಂಬಂಧಿ ಸಿದಂತೆ ಅನೇಕ ಲೇಖನಗಳನ್ನೂ ಬರೆದಿದ್ದಾರೆ. ಸಂಗೀತ ವಿಚಾರಕುರಿತು ಅಧಿಕಾರಯುತವಾಣಿಯಿಂದ ಮಾತನಾಡಬಲ್ಲವರಾಗಿದ್ದರು. ಒಮ್ಮೆ ಮದರಾಸಿನ ಸಂಗೀತ ಅಕಾಡೆಮಿಯಲ್ಲಿ ಪ್ರದರ್ಶನ ಭಾಷಣ ಮಾಡುತ್ತ, ಕಾಪಿ ರಾಗದ ಲಕ್ಷಣಗಳನ್ನೆಲ್ಲ ಉದಾಹರಣೆಸಹಿತ ಹಾಡಿತೋರಿಸಿ ತ್ಯಾಗರಾಜರ ಅನ್ಯಾಯಮು ಸೇಯಕುರ ಎಂಬ ಕೃತಿಯನ್ನು ವಿಶಿಷ್ಟ ಸಂಚಾರಗಳಿಂದ ಹಾಡಿ ತೋರಿಸಿ, ಸ್ವರ ಪ್ರಸ್ತಾರಗಳನ್ನು ಹೊಂದಿಸಿಕೊಂಡು, ರಾಗಲಕ್ಷಣಗಳನ್ನು ನಿರೂಪಿಸುತ್ತ ಕಡೆಯಲ್ಲಿ ಇದೇ ನಿಜವಾದ ಕಾಪಿ. ಉಳಿದಿದೆಲ್ಲ ಡಿಕಾಕ್ಷನ್ ಇಲ್ಲದ ಕಾಫಿ ಎಂದು ಸಭಿಕರನ್ನು ನಗೆಗಡಲಿನಲ್ಲಿ ಮುಳುಗಿಸಿದರು.

	ಇವರು ಮೈಸೂರಿಗೆ 1916ರಲ್ಲಿ ಆಗಮಿಸಿದಾಗ ನಾಲ್ವಡಿ ಕೃಷ್ಣರಾಜ ಒಡೆಯರು ಇವರ ಸಂಗೀತ ಕೇಳಿ ಸಂಗೀತದ ಹುಲಿ ಎಂದು ಇವರನ್ನು ಹೊಗಳಿ ಗೌರವಿಸಿದರು. ಇಲ್ಲಿಂದ ಮುಂದೆ ಟೈಗರ್‍ವರದಾಚಾ ರ್ಯರೆಂದೇ ಪ್ರಸಿದ್ಧರಾದರು. ಡಿವಿಜಿ ಹಾಗೂ ಪಾಲ್ಗಾಟ್ ಅನಂತರಾಮ ಭಾಗವತರು ಇವರ ಶೈಲಿಯನ್ನು ಗಂಡುಶೈಲಿ ಎಂದು ಕರೆದಿದ್ದಾರೆ. ತಮ್ಮ ಆಪ್ತಮಿತ್ರರಾದ ವಾಸುದೇವಾಚಾರ್ಯರ ಪ್ರಾರ್ಥನೆಯಂತೆ ಜಯಚಾಮರಾಜ ಒಡೆಯರು ವರದಾಚಾರ್ಯರನ್ನು ತಮ್ಮ ಆಸ್ಥಾನಕ್ಕೆ ಬರಮಾಡಿಕೊಂಡು ಇವರ ಸಂಗೀತ ಕೇಳಿ ಸಂತೋಷಪಟ್ಟು ತಮ್ಮ ಆಸ್ಥಾನವಿದ್ವಾಂಸರಾಗಿ ನೇಮಿಸಿಕೊಂಡರು. ಕರ್ನಾಟಕದ ಇಬ್ಬರು ಘನವಿದ್ವಾಂಸರಾದ ವೀಣೆ ವೆಂಕಟಗಿರಿಯಪ್ಪ ಹಾಗೂ ತಮ್ಮ ಸಹೋದ್ಯೋಗಿಗಳಾದ ಮೈಸೂರು ವಾಸುದೇವಾಚಾರ್ಯರನ್ನು ತಮ್ಮ ಅಧಿಕಾರಾವಧಿಯಲ್ಲಿ ಕಲಾಕ್ಷೇತ್ರಕ್ಕೆ ಬರಮಾಡಿಕೊಂಡು ಗೌರವಿಸಿದರು. ವಾಸುದೇವಾಚಾರ್ಯ ಹಾಗೂ ಟೈಗರ್ ವರದಾಚಾರ್ಯ ಇಬ್ಬರೂ ಪಟ್ಣಮ್ ಸುಬ್ರಹ್ಮಣ್ಯ ಅಯ್ಯರ್ ಅವರಲ್ಲಿ ಕಲಿತರು. ಆದರೂ ಹಿರಿಯರಾದ ವಾಸುದೇವಾಚಾರ್ಯರ ಬಗೆಗೆ ವರದಾಚಾರ್ಯರಿಗೆ ಅಪಾರ ಗೌರವ ಮತ್ತು ವಿಶ್ವಾಸ. ಇವರು ತಮ್ಮ ಬಾಳಿನ ಕಟ್ಟ ಕಡೆಯ ತನಕ ಕಲಾಕ್ಷೇತ್ರವನ್ನೇ ತಮ್ಮ ಉಸಿರಾಗಿಟ್ಟುಕೊಂಡಿದ್ದರು. ಇವರು 1950 ಜನವರಿ 31ರಂದು ನಿಧನರಾದರು. ಇವರ ಶಿಷ್ಯರ ಪೈಕಿ ಎಂ.ಡಿ.ರಾಮನಾ ಥನ್ ಮತ್ತು ಎಸ್.ರಾಮನಾಥನ್ ಪ್ರಸಿದ್ಧರು.
												(ಕೆ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ